ಕೇರಳ ಕರ್ಷಕನ್		
 
ಕೇರಳ ಸರ್ಕಾರದ ಕೃಷಿ ಇಲಾಖೆಯ ಮುಖಪತ್ರ, ಮಾಸಿಕೆ; ತಿರುವನಂತಪುರದಿಂದ ಪ್ರಕಟವಾಗುತ್ತಿದೆ. 1954ರಲ್ಲಿ ಸ್ಥಾಪಿತ. ಪ್ರಾರಂಭದಲ್ಲಿ ಇದರ ವಾರ್ಷಿಕ ಚಂದಾ 12 ಆಣೆ. ಈಗ ಬಿಡಿ ಪ್ರತಿಯ ಬೆಲೆ 15 ಪೈಸೆ. ಇದರಲ್ಲಿ ಕೃಷಿಕರಿಗೆ ಉಪಯುಕ್ತವಾದ ಲೇಖನಗಳಿರುತ್ತವೆ. ಕೃಷಿಗೆ ಸಂಬಂಧಿಸಿದ ಸಮಸ್ಯೆಗಳು, ಹೊಸ ವಿಧಾನಗಳು ಮತ್ತು ನೂತನ ಪ್ರವೃತ್ತಿಗಳನ್ನು ಕುರಿತ ಸಚಿತ್ರ ಲೇಖನಗಳನ್ನೊಳಗೊಂಡ ಈ ಪತ್ರಿಕೆಗೆ ಬೇಸಾಯ, ಹೈನುಗಾರಿಕೆ, ಪಶುಪೋಷಣೆ, ಸಹಕಾರ ಮುಂತಾದ ನಾನಾಕ್ಷೇತ್ರಗಳ ತಜ್ಞರು ಲೇಖನ ಬರೆಯುತ್ತಾರೆ. ಇದು ಮಲಯಾಳಂ ಭಾಷೆಯ ಪತ್ರಿಕೆ. ಕೃಷಿಯಲ್ಲಿ ಆಸಕ್ತಿಯುಳ್ಳ ಎಲ್ಲರಿಗೂ ಅತ್ಯಂತ ಪ್ರಿಯವಾಗಿದೆ.
	
ಪತ್ರಿಕೆಯನ್ನು ತಿರುವಾಂಕೂರು-ಕೊಚ್ಚಿಯ ಕೃಷಿ ಇಲಾಖೆ ಆರಂಭಿಸಿತು. 1956ರಲ್ಲಿ ಕೃಷಿ ಸಮಾಚಾರ ಸೇವಾ ವ್ಯವಸ್ಥೆ ಆರಂಭವಾದಾಗ ಪತ್ರಿಕೆಯ ಪ್ರಕಟಣೆಯ ಕಾರ್ಯವನ್ನು ಅದಕ್ಕೆ ವಹಿಸಲಾಯಿತು. 1956ರಲ್ಲಿ ಕೇರಳ ರಾಜ್ಯ ಸ್ಥಾಪಿತವಾದಾಗ ಕೇರಳ ಕರ್ಷಕನ್ ಪತ್ರಿಕೆಯನ್ನು ಇನ್ನೂ ಆಕರ್ಷಕವಾಗಿ ಮಾಡಲು ಸರ್ಕಾರ ತೀರ್ಮಾನಿಸಿತು. ಪತ್ರಿಕೆಗಾಗಿ ಪೂರ್ಣ ವೇಳೆಯ ಸಂಪಾದಕನೊಬ್ಬನ್ನು ನೇಮಿಸಿ, ಕೃಷಿ ಸಮಾಚಾರ ಸೇವಾ ವ್ಯವಸ್ಥೆಯ ಸಿಬ್ಬಂದಿಯನ್ನು ಹೆಚ್ಚಿಸಲಾಯಿತು.
	
ಪತ್ರಿಕೆಯ ಪ್ರಕಟಣೆಯ ಕಾರ್ಯವನ್ನು ಕೃಷಿ ಸಮಾಚಾರ ಸೇವಾ ವ್ಯವಸ್ಥೆ ವಹಿಸಿಕೊಂಡಾಗ ಅದರ ಪ್ರಸಾರ 1,200. ಸಮಾಚಾರ ಸೇವಾ ವ್ಯವಸ್ಥೆಯ ಅಡಿಯಲ್ಲಿ ಪತ್ರಿಕೆಯ ಪ್ರಥಮ ಸಂಚಿಕೆ ಪ್ರಕಟವಾದ್ದು 1957ರ ಅಕ್ಟೋಬರಿನಲ್ಲಿ. ಅಲ್ಲಿಂದೀಚೆಗೆ ಪತ್ರಿಕೆ ಶೀಘ್ರವಾಗಿ ಪ್ರವರ್ಧಮಾನಕ್ಕೆ ಬಂತು. 

	 (ಕೆ.ಟಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ